ಕಿಂಗ್, ಕೊರೆಟಾ

 1927-. ಖ್ಯಾತ ನೀಗ್ರೋ ನಾಯಕ ಡಾ. ಮಾರ್ಟಿನ್ ಲ್ಯೂಥರ್ ಕಿಂಗನ ಹೆಂಡತಿ. (ನೋಡಿ- ಕಿಂಗ್,-ಮಾರ್ಟಿನ್-ಲ್ಯೂಥರ್-(ಜೂನಿಯರ್)) ಆಲಬಾಮಾ ಸಂಸ್ಥಾನದ ಹೈಬರ್ಗರ್‍ನಲ್ಲಿ 1927ರ ಏಪ್ರಿಲ್ 27ರಂದು ಹುಟ್ಟಿದರು. ಬಾಲ್ಯ ಕಷ್ಟದಲ್ಲೇ ಕಳೆಯಿತು. ಶಾಲೆ ಮುಗಿಸಿ ಕಾಲೇಜಿಗೆ ಬರುವ ವೇಳೆಗೇ ಈಕೆಗೆ ಸಂಗೀತದಲ್ಲಿ ಪ್ರಬಲವಾದ ಆಸಕ್ತಿ ಹುಟ್ಟಿತ್ತು. ಕಾಲೇಜಿನಲ್ಲಿ ಅದು ಪ್ರಬಲವಾಯಿತು. ಆಮೇಲೆ ಬಾಸ್ಟನಿನ ಪ್ರಸಿದ್ಧ ಸಂಗೀತ ಶಿಕ್ಷಣ ಶಾಖೆಯೊಂದನ್ನು ಸೇರಿದಳು. ಸ್ನೇಹಿತೆಯೊಬ್ಬಳ ಒತ್ತಾಯದ ಫಲವಾಗಿ ಡಾ. ಕಿಂಗನನ್ನು ಭೇಟಿಯಾದಳು. ತನಗೆ ತಿಳಿಯದೆಯೇ ಅವನಲ್ಲಿ ಆಸಕ್ತಳಾದಳು. ಗಾಢಸ್ನೇಹ ಬೆಳೆಯಿತು. 1953ರ ಜೂನ್ 18ರಂದು ಹೈಬರ್ಗರ್‍ನಲ್ಲಿ ಇವರಿಬ್ಬರ ನಡುವೆ ಅತ್ಯಾಧುನಿಕ ರೀತಿಯಲ್ಲಿ ಮದುವೆ ನಡೆಯಿತು. ಕೆಲವು ತಿಂಗಳಲ್ಲೇ ಕೊರೆಟಾ ಸಂಗೀತ ಶಿಕ್ಷಣ ಮುಗಿಯಿತು. ಕಿಂಗ್‍ಗೆ ಮಾಂಟ್ಗಮರಿಯ ಡೆಕ್ಸೆಟರ್ ಅವೆನ್ಯೂ ಬ್ಯಾಷ್ಟಿಸ್ಟ್ ಚರ್ಚಿನಲ್ಲಿ ಪಾದ್ರಿಯ ಕೆಲಸ ಸಿಕ್ಕಿದ್ದರಿಂದ 1954ರಲ್ಲಿ ಇಬ್ಬರೂ ಬಾಸ್ಟನನ್ನು ಬಿಟ್ಟು ಮಾಂಟ್ಗಮರಿಗೇ ಹೋಗಿ ನೆಲಸಿದರು.

 ಮಾಂಟ್ಗಮರಿಯ ಬಸ್ ಬಹಿಷ್ಕಾರದಿಂದ ಡಾ. ಕಿಂಗನ ರಭಸದ ಸಾರ್ವಜನಿಕ ಜೀವನ ಆರಂಭವಾಯಿತು. 1960ರಲ್ಲಿ ಆತನ ಅನುಕೂಲಕ್ಕಾಗಿ ಸಂಸಾರ ಮಾಂಟ್ಗಮರಿಯನ್ನು ಬಿಟ್ಟು ಅಟ್ಲಾಂಟಕ್ಕೆ ಬಂತು. ಡಾ. ಕಿಂಗ್ ಸಾರ್ವಜನಿಕ ಜೀವನದಲ್ಲಿ ಮುಳುಗಿದ್ದಾಗ ಕೊರೆಟಾ ಬೆಳೆಯುತ್ತಿದ್ದ ಸಂಸಾರದ ಕಡೆಗೆ ಎಲ್ಲ ಗಮನವನ್ನೂ ಕೊಟ್ಟಳು. 1956ರಲ್ಲಿ ಯಾರೋ ತಮ್ಮ ಮನೆಯೊಳಗೆ ಬಾಂಬೊಂದನ್ನು ಎಸೆದಾಗಿನಿಂದ ತನ್ನ ಗಂಡನ ಜೀವನವನ್ನು ಆವರಿಸಿದ್ದ ಅಪಾಯಗಳ ಅರಿವು ಆಕೆಗೆ ಪೂರ್ಣವಾಗಿಯೇ ಇತ್ತು. ಈ ಭೀತಿಯ ನೆರಳಿನಲ್ಲೇ ತನ್ನ ನಾಲ್ಕೂ ಮಕ್ಕಳನ್ನು ಸಾಕಿ ದೊಡ್ಡವರನ್ನಾಗಿ ಮಾಡಿದಳು.

 ಕೊರೆಟಾ ಪತಿಯೊಡನೆ ನೂರಾರು ಪ್ರದರ್ಶನಗಳಲ್ಲಿ ಭಾಗವಹಿಸಿದಳು. 1959ರಲ್ಲಿ ಆತನೊಡನೆ ಭಾರತಕ್ಕೆ ಬಂದು ಅನೇಕ ರಸಿಕವೃಂದಗಳ ಮುಂದೆ ಹಾಡಿದಳು. 1964ರಲ್ಲಿ ಶಾಂತಿಗಾಗಿ ಕೊಡಲ್ಪಟ್ಟ ನೊಬೆಲ್ ಪಾರಿತೋಷಕವನ್ನು ಸ್ವೀಕರಿಸಲು ಡಾ. ಕಿಂಗ್ ಆಸ್ಲೋಗೆ ತೆರಳಿದಾಗ ಅವನೊಡನೆ ಈಕೆಯೂ ಹೋಗಿದ್ದಳು. ಇಷ್ಟಲ್ಲದೆ 1962ರಲ್ಲಿ ಜಿನೀವದಲ್ಲಿ ಸೇರಿದ ನಿಶ್ಯಸ್ತ್ರೀಕರಣ ಸಮ್ಮೇಳನದಲ್ಲಿ ಮಹಿಳಾಪ್ರತಿನಿಧಿಯಾಗಿ ಭಾಗವಹಿಸಿದ್ದಳು. ಈಕೆಯ ದುಡಿಮೆ ಈಗಲೂ ನೀಗ್ರೋ ಚಳವಳಿಗೆ ಮೀಸಲಾಗಿದೆ.

 1968ರಲ್ಲಿ ಡಾ. ಕಿಂಗ್ ಹತ್ಯಾಕಾರಿಯೊಬ್ಬನ ಗುಂಡಿಗೆ ಬಲಿಯಾದಾಗ ಶ್ರೀಮತಿ ಕಿಂಗ್ ಪ್ರದರ್ಶಿಸಿದ ಸ್ಥೈರ್ಯ ಅಪ್ರತಿಮವಾಗಿತ್ತು. ಪತಿ ನೆರವೇರಿಸಲು ಒಪ್ಪಿದ್ದ, ಆದರೆ ನೆರವೇರಿಸಲಾಗದೆ ಹೋದ ಎಲ್ಲ ಕಾರ್ಯಕಲಾಪಗಳನ್ನೂ ತಾನೇ ನೆರವೇರಿಸಿ ಕೊಟ್ಟಳು. ಅಮೆರಿಕದ ಜನದ ದೃಷ್ಟಿಯಲ್ಲಿ ಈಕೆ ಡಾ. ಕಿಂಗನ ಅಹಿಂಸಾತ್ಮಕ ಸಾಮಾಜಿಕ ಪರಿವರ್ತನೆಯ ಒಬ್ಬ ಹೊಸ ಹರಿಕಾರೆಯಾಗಿದ್ದಾಳೆ.

 ಡಾ. ಮಾರ್ಟಿನ್ ಲ್ಯೂಥರ್ ಕಿಂಗ್‍ಗೆ ಭಾರತ ನೀಡಿದ ಜವಾಹರಲಾಲ್ ನೆಹರೂ ಪಾರಿತೋಷಕವನ್ನು ಶ್ರೀಮತಿ ಕಿಂಗ್ ಅವನ ಪರವಾಗಿ ಸ್ವೀಕರಿಸಿದಾಗ, ಆ ಹಣದಲ್ಲಿ ಅರ್ಧವನ್ನು ಅಮೆರಿಕದ ನೀಗ್ರೋ ಹೋರಾಟಕ್ಕಾಗಿ ತೆಗೆದಿಡಲಾಗುವುದೆಂದೂ ಉಳಿದರ್ಧದಲ್ಲಿ ಭಾರತದ ಹರಿಜನ ವಿದ್ಯಾರ್ಥಿಯೊಬ್ಬ ಅಟ್ಲಾಂಟದ ಕಿಂಗ್ ಸ್ಮಾರಕ ಸಂಸ್ಥೆಯಲ್ಲಿ ಶಿಕ್ಷಣ ಪಡೆಯಲು ಅನುವಾಗುವಂಥ ನಿಧಿಯೊಂದನ್ನು ಸ್ಥಾಪಿಸಲಾಗುವುದೆಂದೂ ಫೋಷಿಸಿದಳು.

 ಡಾ. ಕಿಂಗ್ ಜೊತೆಯಲ್ಲಿ ತಾನು ಕಳೆದ ದಿನಗಳನ್ನು ಕುರಿತು ಈಕೆ ಪುಸ್ತಕವೊಂದನ್ನು ಬರೆದಿದ್ದಾಳೆ. ಇದು ತನ್ನ ಹೃದಯಸ್ಪರ್ಶಿ ಗುಣದಿಂದ ವಿಮರ್ಶಕರ ಗಮನವನ್ನು ಸೆಳೆದಿದೆ.     

 (ಎಂ.ಎಸ್.ಎಚ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ